ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು
ರಾಮಪುರ ಎಂಬ ಸುಂದರ ಗ್ರಾಮವು ಹಸಿರುಹೊದ್ದ ಕಾನವಾಗಿತ್ತು. ಅಲ್ಲಿನ ಪ್ರತಿಯೊಬ್ಬರು ಕೃಷಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹದಾಸೆ ಎಲ್ಲ ಹೆತ್ತವರ ಮನದಲ್ಲಿತ್ತು. ಅದೊಂದು ರಸ್ತೆಯೂ ಇಲ್ಲದ ಬಸ್ಸು ಬಾರದ ಕುಗ್ರಾಮವಾಗಿತ್ತು. ಹೀಗಿದ್ದರು ಸಣ್ಣದೊಂದು ಶಾಲೆ ತಲೆಎತ್ತಿ ನಿಂತಾಗ ಪ್ರತಿಮನೆಯಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ರಾಮಣ್ಣನ ಮಕ್ಕಳು ಪುಷ್ಪ ಮತ್ತು ಪ್ರಸಾದ್ ಅಣ್ಣ ತಂಗಿಯರು ಕೂಡ ಬಹಳ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದರು. ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಗೆ ಹೋಗುವ ಸಮಯ ಬಂದಿತು. ಕಾಡು ಮಾರ್ಗದಲ್ಲಿ ಹೋಗುವುದು ಭಯವಾಗುತ್ತಿತ್ತು. ಹಾಗಾಗಿ ಹೆಣ್ಮಕ್ಕಳಿಗೆ ಮನೆಯವರು ಕಳುಹಿಸುತ್ತಿರಲಿಲ್ಲ. ಹುಡುಗರು ತಮ್ಮ ಸೈಕಲ್ ಏರಿ ಹೈಸ್ಕೂಲ್ ಮುಗಿಸಿದರು. ಇದರಿಂದ ಪುಷ್ಪಳಿಗೆ ಬಹಳ ಬೇಸರವಾಯಿತು. ತನ್ನ ಓದುವ ಕನಸು ಕಮರಿಹೋಯಿತು.
ಹೀಗಿದ್ದಾಗ ತಂದೆಗೆ ಒತ್ತಾಯ ಮಾಡಿ ಶಾಲೆಗೆ ಕಳುಹಿಸಲು ಹೇಳಿದಳು. ಮೊದಮೊದಲು ಒಪ್ಪದ ತಂದೆ ನಂತರದಲ್ಲಿ ಒಪ್ಪಿಗೆ ಸೂಚಿಸಿದರು. ಆ ಹಳ್ಳಿಯಲ್ಲಿ ಅವಳೊಬ್ಬಳೇ ಹೈಸ್ಕೂಲು ಮೆಟ್ಟಿಲು ಹತ್ತಿದವಳು ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಇದು ಅವಳಲ್ಲಿ ಜಂಭೂಡಿಸದಲು ಎಡೆಮಾಡಿಕೊಟ್ಟಿತು. ತಂದೆಯ ಬಳಿ ಯಾವಾಗಲೂ ಹಣ ಕೇಳುವುದು. ಕಂಡದ್ದನ್ನೆಲ್ಲ ಖರೀದಿಸಿ ದುಂದುವೆಚ್ಚ ಮಾಡುವುದು. ತಂದೆ ಏಕೆ ಇಷ್ಟು ಹಣ? ಎಂದು ಕೇಳಿದರೆ "ಶಾಲೆಯಲ್ಲಿ ಹೇಳಿದ್ದಾರೆ... " ಎಂದು ಸುಳ್ಳು ಹೇಳುವುದು.
ಹೀಗೆ ಒಂಭತ್ತನೇ ತರಗತಿಗೆ ಬರುವಷ್ಟರಲ್ಲಿ ಸ್ನೇಹಿತರ ದೊಡ್ಡ ಗುಂಪೇ ಅವಳೊಂದಿಗೆ ಜೊತೆಯಾಗಿತ್ತು. ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಸುದ್ದಿ ಕೇಳಿದ ತಂದೆಗೆ ಎಲ್ಲಿಲ್ಲದ ಆಘಾತವಾಯಿತು. ಜೊತೆಗೆ ಅಂಕಪಟ್ಟಿಗೆ ಸಹಿ ಹಾಕಲು ಶಾಲೆಗೆ ಬರಲು ಹೇಳಿದ್ದರು. ಒಮ್ಮೆಯೂ ಶಾಲೆ ಕಡೆಗೆ ಮುಖ ಮಾಡದ ರಾಮಣ್ಣನಿಗೆ ಅವಮಾನವಾಯಿತು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಮಾತು ಕೇಳಿ ತಮ್ಮ ಕಿವಿಯನ್ನೇ ನಂಬಲು ಅಸಾಧ್ಯವಾಯಿತು. "ನಿಮ್ಮ ಮಗಳು ಓದಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ತರಗತಿಗೂ ಸರಿಯಾಗಿ ಬರುತ್ತಿಲ್ಲ. ಬದಲಾಗಿ ಹುಡುಗರ ಜೊತೆಗೆ ಅಲ್ಲಲ್ಲಿ ತಿರುಗಾಡುತ್ತಿರುವುದನ್ನುಉಳಿದ ವಿದ್ಯಾರ್ಥಿಗಳು, ಶಿಕ್ಷಕರು ಸಹ ನೋಡಿದ್ದಾರೆ. ಅವಳು ಹಾದಿ ತಪ್ಪುವ ಮೊದಲು ಬೈದು ಬುದ್ದಿಹೇಳಿ. ಈ ವಿಷಯವನ್ನು ತಿಳಿಸಲೆಂದೇ ನಿಮ್ಮನ್ನು ವೈಯಕ್ತಿಕವಾಗಿ ಕರೆಯಬೇಕಾಯಿತು ಎಂದರು.
ತಂದೆಗೆ ತಲೆಬಿಸಿಯಾಯಿತು. ಸಂಜೆ ಮಗಳು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು. ಮಗನ ಜೊತೆಗೆ ಬಾರದೇ ಇರುವುದನ್ನು ನೋಡಿ ಕೋಪ ನೆತ್ತಿಗೇರಿತು. ತನ್ನ ಮಡದಿಯನ್ನು ಕರೆದು ಮಗ ಬರುವ ತನಕ ಕಾದು ಎಲ್ಲರೂ ಜೊತೆಗಿದ್ದ ಸಮಯ ನೋಡಿ ಮಗಳಿಗೆ ಚೆನ್ನಾಗಿ ಬೈದು ಬುದ್ದಿಮಾತನ್ನು ಹೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ಅಣ್ಣನು ಕೂಡ ಹೌದು, ನಾನೆಷ್ಟು ಹೇಳಿದರು ನನ್ನ ಮಾತನ್ನು ಕೇಳುತ್ತಿಲ್ಲ. ಎಲ್ಲ ಹುಡುಗರ ಎದುರೇ ಅವಮಾನ ಮಾಡುತ್ತಾಳೆ ಎಂದನು.
ಮಗಳಿಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಚಿತವಾಯಿತು. ನೀನಿನ್ನು ಶಾಲೆಗೆ ಹೋಗುವುದು ಬೇಡ ಎಂದು ಗದರಿಸಿದರು. ಒಂಭತ್ತನೇ ತರಗತಿಯು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಪುಷ್ಪಾಳಿಗೆ ಎಲ್ಲಿಲ್ಲದ ದುಃಖವಾಯಿತು. ಒಮ್ಮೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದಾಗ ತಂದೆಯ ಕೋಣೆಗೆ ಹೋಗಿ ಕಾಲಿಗೆ ಬಿದ್ದಳು. " ಇಲ್ಲ ಅಪ್ಪ ನಾನಿನ್ನು ಈ ತರಹ ಮಾಡುವುದಿಲ್ಲ. ದಯಮಾಡಿ ಓದಲು ಕಳುಹಿಸಿ. ನಾನು ಅಣ್ಣನಂತೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರುವೆ. ಕಾಲೇಜು ಡಿಗ್ರಿ ಓದುವ ಕನಸಿದೆ. ನನ್ನ ತಪ್ಪಿನ ಅರಿವಾಗಿದೆ..." ಎಂದು ಕೇಳಿಕೊಂಡಳು.
ಮರುದಿನ ಮಗಳನ್ನು ಕರೆದುಕೊಂಡು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಮತ್ತೆ ಶಾಲೆಗೆ ಬರಲು ಅನುಮತಿ ದೊರಕಿತು. ಪರೀಕ್ಷೆಯಲ್ಲಿ ಪಾಸಾದಳು. ಮುಂದೆಂದೂ ಈ ರೀತಿಯ ತಪ್ಪನ್ನು ಮಾಡಲು ಹೋಗಲಿಲ್ಲ.
ಓದುವ ವಯಸ್ಸಿನಲ್ಲಿ ಅನ್ಯ ವಿಷಯದ ಬಗ್ಗೆ ಆಸಕ್ತಿ ಆಕರ್ಷಣೆ ಮೂಡುವುದು ಸಹಜ. ಏನೂ ಅರಿಯದ, ಮುಂದಾಗುವ ಅಪಾಯವನ್ನೇ ಊಹಿಸದ ಹರೆಯದ ಮನಸ್ಸು ಮನೆಯವರೇ ದೂರದವರಂತೆ ಭಾವಿಸಿ ಹೊರಗಿನವರನ್ನು ನೆಚ್ಚಿಕೊಳ್ಳುವುದು. ಹೆತ್ತವರು ಸರಿಯಾದ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವುದು ದೊಡ್ಡ ಜವಾಬ್ದಾರಿಯಾಗಿದೆ.
- ಸಿಂಧು ಭಾರ್ಗವ ಬೆಂಗಳೂರು
No comments:
Post a Comment